ಬಿಂಬಸಾರ
ಪ್ರಾಚೀನ ಮಗಧ ರಾಜ್ಯದ ರಾಜ. ಕ್ರಿ.ಪೂ. ಆರನೆಯ ಶತಮಾನದಲ್ಲಿ ಆಳಿದ ಈ ರಾಜನ ಬಗ್ಗೆ ಬೌದ್ಧ ಸಾಹಿತ್ಯ ಮತ್ತು ಪುರಾಣಗಳೇ ಮುಖ್ಯ ಆಕರಗಳು. ಬಿಂಬಸಾರ ಶಿಶುನಾಗ ವಂಶಕ್ಕೆ ಸೇರಿದವನೆಂದು ಪುರಾಣಗಳೂ ನಂದರಿಗಿಂತ ಮೊದಲು ಆಳಿದವರಲ್ಲಿ ಮೊದಲಿಗನೆಂದು ಬೌದ್ಧ ಸಾಹಿತ್ಯವೂ ಹೇಳುತ್ತವೆ. ಒಟ್ಟಿನಲ್ಲಿ ಈತ ಗೌತಮ ಬುದ್ಧ ಮತ್ತು ವರ್ಧಮಾನ ಮಹಾವೀರ ಇವರ ಸಮಕಾಲೀನ. ಕ್ರಿ.ಪೂ.ಸು. 582ರಲ್ಲಿ ಪಟ್ಟವೇರಿದನೆಂಬ ಅಭಿಪ್ರಾಯವಿದೆ. ಬಿಂಬಸಾರ ಬುದ್ಧನ ಮರಣಕ್ಕೆ 60 ವರ್ಷ ಮೊದಲೇ ಪಟ್ಟಕ್ಕೆ ಬಂದನೆಂದೂ ಬುದ್ಧ ಕ್ರಿ.ಪೂ. 486 ರಲ್ಲಿ ತೀರಿಕೊಂಡಿದ್ದು ಬಿಂಬಸಾರ ಕ್ರಿ.ಪೂ.ಸು.546ರಲ್ಲಿ ಪಟ್ಟಕ್ಕೆ ಬಂದನೆಂದೂ ಸಿಂಹಳ ಸಂಪ್ರದಾಯದ ಮೂಲ ತಿಳಿಸುತ್ತದೆ. ಅವನು ಪಟ್ಟಕ್ಕೆ ಬಂದಾಗ ಹದಿನೈದು ವರ್ಷಗಳ ತರುಣನೆಂದು 'ಮಹಾವಂಶ ದಿಂದ ತಿಳಿದುಬರುತ್ತದೆ. ಬಿಂಬಸಾರ ಸೇನಾಧಿಪತಿಯಾಗಿದ್ದನೆಂದು ಭಂಡಾರ್ಕರ್ ಅವರ ಅಭಿಪ್ರಾಯ. ಬೌದ್ಧೇತರ ಮೂಲಗಳಂತೆ ಅವನ ತಂದೆಯ ಹೆಸರು ಭಟ್ಟಿಯ ಅಥವಾ ಮಹಾಪದ್ಮ. ಬಿಂಬಸಾರನ ಮೊದಲ ರಾಜಧಾನಿ ಗಿರಿವರಜ (ರಾಜಗೃಹ). ಅವನು ಅಂಗದೇಶದ ಮೇಲೆ ದಂಡೆತ್ತಿ ಹೋಗಿ ಅದನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಂಡ. ಬಿಂಬಸಾರ ತನ್ನ ಕಾಲದ ಅತ್ಯಂತ ಪ್ರಬಲ ರಾಜನಾಗಿದ್ದು ಕೋಶಲ, ಲಿಚ್ಛವಿ, ಮಾದ್ರ ಮೊದಲಾದ ಪ್ರಮುಖ ದೇಶಗಳ ರಾಜರುಗಳ ಕನ್ಯೆಯರನ್ನು ವಿವಾಹವಾಗಿದ್ದ. ಈತ ಕಾರ್ಯಾಂಗ, ನ್ಯಾಯಾಂಗ ಮತ್ತು ಸೈನ್ಯ ವಿಭಾಗಗಳನ್ನೊಳಗೊಂಡ ಉತ್ತಮ ಆಡಳಿತ ವ್ಯವಸ್ಥೆಗೆ ಬುನಾದಿ ಹಾಕಿದ್ದ. ಇತಿಹಾಸ ಪ್ರಸಿದ್ಧ ಪಾಟಲೀಪುತ್ರದಲ್ಲಿ ಕೋಟೆ ಕಟ್ಟಿಸಿದ, ಇವನನ್ನು ಮಗಧ ಸಾಮ್ರಾಜ್ಯದ ಸ್ಥಾಪಕನೆಂದು ಇತಿಹಾಸಕಾರರು ಕರೆದಿದ್ದಾರೆ.

ಜೈನ ಮತ್ತು ಬೌದ್ಧ ಮತಗಳೆರಡೂ ಬಿಂಬಸಾರನನ್ನು ತಮ್ಮ ಅನುಯಾಯಿಯೆಂದು ಹೇಳಿಕೊಂಡಿವೆ. ಇವನು ಬುದ್ಧನನ್ನು ಮೊದಲಬಾರಿಗೆ ಗಿರಿವರಜದಲ್ಲಿ ಸಂಧಿಸಿ ಅವನಿಗೆ ಹಲವು ಬಗೆಯ ನೆರವು ನೀಡಿದ್ದಲ್ಲದೆ ಸ್ವತ: ಆಸಕ್ತಿ ವಹಿಸಿ ಬೌದ್ಧ ಕೇಂದ್ರದ ಸ್ಥಾಪನೆಗೂ ಪ್ರೋತ್ಸಾಹಿಸಿದ. ಇವನ ಪತ್ನಿಯರಲ್ಲಿ ಬೌದ್ಧ ಮತ್ತು ಜೈನ ಮತಾವಲಂಬಿಗಳಿದ್ದರು. ಬೌದ್ಧ ಧರ್ಮ ವಿಶೇಷ ಪೋಷಣೆ ಪಡೆದರೂ ಬಿಂಬಸಾರ ಸರ್ವ ಧರ್ಮಗಳಿಗೂ ಪ್ರೋತ್ಸಾಹವಿತ್ತನೆಂದು ಹೇಳಬಹುದು.

ಬಿಂಬಸಾರ 28 ವರ್ಷಗಳ ಕಾಲ ಆಳಿದನೆಂದು ತಿಳಿದುಬರುತ್ತದೆ. ಅವನ ಹಲವಾರು ಮಕ್ಕಳಲ್ಲಿ ಪ್ರಬಲನಾದ ಮತ್ತು ಕೋಶಲ ರಾಣಿಯಲ್ಲಿ ಹುಟ್ಟಿದ ಅಜಾತಶತ್ರು (ನೋಡಿ- ಅಜಾತಶತ್ರು) ಬಿಂಬಸಾರನನ್ನು ಕೊಲೆಮಾಡಿದನೆಂದು ಬೌದ್ಧ ಮೂಲಗಳು ತಿಳಿಸುತ್ತವೆ. ಬಿಂಬಸಾರನ ಸೆರೆಯಲ್ಲಿದ್ದಾಗ ಅವನೇ ಆತ್ಮಹತ್ಯೆ ಮಾಡಿಕೊಂಡನೆಂದು ಜೈನ ಮೂಲಗಳಿಂದ ತಿಳಿದುಬಂದಿರುತ್ತದೆ.
(ಡಿ.ಎಸ್.ಜೆ.; ಎಂ.ಕೆ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ